ಬುಧವಾರ, ಜುಲೈ 15, 2026 | ಬೆಂಗಳೂರು, ಭಾರತ
ಕೆಬಿ ನ್ಯೂಸ್ ಕರ್ನಾಟಕ

ಕೆಬಿ ನ್ಯೂಸ್ ಕರ್ನಾಟಕ

ಜನರಿಂದ,ಜನರಿಗಾಗಿ, ಜನರಿಗೋಸ್ಕರ
ನಿಷ್ಪಕ್ಷಪಾತ, ನಿಖರ ಮತ್ತು ಸಮಯೋಚಿತ ಸುದ್ದಿ ವರದಿಗಾರಿಕೆ: ಸಕ್ರಿಯ
ಬ್ರೇಕಿಂಗ್ ನ್ಯೂಸ್
ಮುಖ್ಯಾಂಶಗಳು: ₹೧೫,೬೧೧ ಕೋಟಿ ವೆಚ್ಚದ ನಮ್ಮ ಮೆಟ್ರೋ ಹಂತ ೩ ರ ಯೋಜನೆಗೆ ಕೇಂದ್ರ ಸಚಿವ ಸಂಪುಟದ ಮಂಜೂರಾತಿ.     •     ಹವಾಮಾನ ಮುನ್ಸೂಚನೆ: ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ೪೮ ಗಂಟೆಗಳ ಕಾಲ ಭಾರಿ ಮಳೆ ಮುನ್ಸೂಚನೆ.     •     ಕೃಷಿ ಮಾಹಿತಿ: ಎಲ್ಲಾ ಜಿಲ್ಲೆಗಳಲ್ಲಿ ಇಂದಿನಿಂದ ಬೆಳೆ ವಿಮೆ ಮತ್ತು ಬಡ್ಡಿರಹಿತ ಸಾಲಕ್ಕೆ ಆನ್‌ಲೈನ್ ನೊಂದಣಿ ಆರಂಭ.
10 ತಿಂಗಳ ಬಾಕಿ ವೇತನ ಬಿಡುಗಡೆಗೆ ಆಗ್ರಹಿಸಿ ಜಾನಪದ ವಿಶ್ವವಿದ್ಯಾಲಯದಲ್ಲಿ ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರ ಅಹೋರಾತ್ರಿ ಧರಣಿ
ಮಂಗಳವಾರ, ಜುಲೈ 14, 2026 ಮಂಜುನಾಥ್ ಎನ್.ಹೆಚ್ ಶಿಗ್ಗಾಂವ, ಪರಿಶೀಲಿಸಿದ ಸುದ್ದಿ

10 ತಿಂಗಳ ಬಾಕಿ ವೇತನ ಬಿಡುಗಡೆಗೆ ಆಗ್ರಹಿಸಿ ಜಾನಪದ ವಿಶ್ವವಿದ್ಯಾಲಯದಲ್ಲಿ ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರ ಅಹೋರಾತ್ರಿ ಧರಣಿ

ಸುದ್ದಿ ಸಾರಾಂಶ: ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರು 10 ತಿಂಗಳ ಬಾಕಿ ವೇತನವನ್ನು ತಕ್ಷಣ ಬಿಡುಗಡೆ ಮಾಡುವಂತೆ ಆಗ್ರಹಿಸಿ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ. ಎರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಕುಲಪತಿ ಭರವಸೆ ನೀಡಿದ್ದರೂ, ಸ್ಪಷ್ಟ ಆದೇಶ ಹೊರಬರುವವರೆಗೆ ಪ್ರತಿಭಟನೆ ಮುಂದುವರಿಸುವುದಾಗಿ ಅವರು ತಿಳಿಸಿದ್ದಾರೆ.
ಸುದ್ದಿ ಶಿಗ್ಗಾಂವ, ಜು. 14: ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರು 2024–25 ಹಾಗೂ 2025–26ನೇ ಶೈಕ್ಷಣಿಕ ವರ್ಷಗಳ 10 ತಿಂಗಳ ಬಾಕಿ ವೇತನವನ್ನು ತಕ್ಷಣ ಬಿಡುಗಡೆ ಮಾಡುವಂತೆ ಆಗ್ರಹಿಸಿ ವಿಶ್ವವಿದ್ಯಾಲಯದ ಆಡಳಿತ ಭವನದ ಎದುರು ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ. ಪ್ರತಿಭಟನಾನಿರತರು ಮಾತನಾಡಿ, ವಿಶ್ವವಿದ್ಯಾಲಯದ ನಿಯಮಾವಳಿಗಳು ಹಾಗೂ ವಿಭಾಗಗಳ ವೇಳಾಪಟ್ಟಿಯಂತೆ ತರಗತಿಗಳನ್ನು ನಡೆಸಿ, ವಿದ್ಯಾರ್ಥಿಗಳಿಗೆ ಬೋಧನೆ ನೀಡುವುದರ ಜೊತೆಗೆ ಪರೀಕ್ಷೆಗಳ ಸುಗಮ ನಿರ್ವಹಣೆಗೆ ಸಂಪೂರ್ಣ ಸಹಕಾರ ನೀಡಿದ್ದೇವೆ. ಆದರೆ ಕಳೆದ 10 ತಿಂಗಳಿಂದ ವೇತನ ಪಾವತಿಯಾಗದ ಕಾರಣ ಕುಟುಂಬ ನಿರ್ವಹಣೆಯೇ ಸಂಕಷ್ಟಕ್ಕೆ ಸಿಲುಕಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಕುರಿತು ಹಲವು ಬಾರಿ ಕುಲಪತಿ, ಕುಲಸಚಿವ ಹಾಗೂ ಸಿಂಡಿಕೇಟ್ ಸದಸ್ಯರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸಿಂಡಿಕೇಟ್ ಸದಸ್ಯರು ವೇತನ ಬಿಡುಗಡೆಗೆ ಸೂಚನೆ ನೀಡಿದ್ದರೂ ಆಡಳಿತದಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಿದರು. ಧರಣಿ ಸ್ಥಳಕ್ಕೆ ಭೇಟಿ ನೀಡಿದ ಕುಲಪತಿ ಪ್ರೊ. ಟಿ.ಎಂ. ಭಾಸ್ಕರ್ ಅವರು ಸಮಸ್ಯೆ ಪರಿಹಾರಕ್ಕಾಗಿ ಎರಡು ದಿನಗಳ ಕಾಲಾವಕಾಶ ಕೋರಿದರು. ಆದರೆ ಬಾಕಿ ವೇತನ ಬಿಡುಗಡೆ ಕುರಿತು ಸ್ಪಷ್ಟ ಆದೇಶ ಹೊರಬರುವವರೆಗೆ ಅಹೋರಾತ್ರಿ ಧರಣಿಯನ್ನು ಮುಂದುವರಿಸಲಾಗುವುದು ಎಂದು ಪ್ರತಿಭಟನಾನಿರತರು ಸ್ಪಷ್ಟಪಡಿಸಿದರು. ನೌಕರರ ಸಂಘದ ಅಧ್ಯಕ್ಷ ಡಾ. ವೆಂಕನಗೌಡ ಪಾಟೀಲ ಅವರು ಧರಣಿ ನಿರತ ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರಿಗೆ ಬೆಂಬಲ ಸೂಚಿಸಿದರು. ಈ ವೇಳೆ ವಿಶ್ವವಿದ್ಯಾಲಯದ ಆಡಳಿತ ಕುಲಸಚಿವರು ವಿಶ್ವವಿದ್ಯಾಲಯದಲ್ಲೇ ಹಾಜರಿದ್ದು ಆಡಳಿತ ನಡೆಸುವ ಬದಲು ಬೇರೆ ಸ್ಥಳದಿಂದಲೇ ಆಡಳಿತ ನಿರ್ವಹಿಸುತ್ತಿರುವುದು ಸರಿಯಲ್ಲ ಎಂದು ಸಿಬ್ಬಂದಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇಂತಹ ಆಡಳಿತ ವೈಖರಿಯಿಂದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ತ್ವರಿತ ಸ್ಪಂದನೆ ದೊರೆಯುತ್ತಿಲ್ಲ ಎಂದು ಆರೋಪಿಸಿ, ವಿಶ್ವವಿದ್ಯಾಲಯದಲ್ಲೇ ಹಾಜರಿದ್ದು ಜವಾಬ್ದಾರಿಯುತವಾಗಿ ಆಡಳಿತ ನಡೆಸಬೇಕು ಎಂದು ಒತ್ತಾಯಿಸಿದರು. ಎರಡು ದಿನಗಳ ಗಡುವಿನೊಳಗೆ ಬಾಕಿ ವೇತನ ಬಿಡುಗಡೆಗೆ ಕ್ರಮ ಕೈಗೊಳ್ಳದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಪ್ರತಿಭಟನಾನಿರತ ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರು ಎಚ್ಚರಿಕೆ ನೀಡಿದರು. ಧರಣಿಯಲ್ಲಿ ಡಾ. ಉತ್ತಮ ಕೆ.ಎಚ್., ಡಾ. ನದಾಫ್ ಎಚ್., ಡಾ. ಶಂಕರ ಕುಂದಗೋಳ, ಡಾ. ರಾಜಶೇಖರ ಡೊಂಬರಮತ್ತೂರು, ಅಭಿನಯ ಎಚ್., ಡಾ. ಅಭಿಲಾಶ್ ಹೆಚ್.ಕೆ., ಡಾ. ರಜೀಯಾ ಬೇಗಂ ನದಾಫ್, ಡಾ. ಪ್ರವೀಣ ಕರೆಪ್ಪನವರ, ಸೈಯದಾ ಖಾದ್ರಿ ಹಾಗೂ ಶಿವಾನಂದ ದೊಡ್ಡಮನಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಸುದ್ದಿಯನ್ನು ಹಂಚಿಕೊಳ್ಳಿ
URL: kbnewskarnataka.com/karnatak-news